A nurturing space for learning and exploring agro-ecological farming practices!

ಹ್ಯಾಪಿ ಮ್ಯಾನ್ ರಾಜು

ಇದು ಬೆಳವಲ ಫೌಂಡೇಶನ್ ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿರುವ ರಾಜುವಿನ ಜೀವನ ವೃತ್ತಾಂತ . ಇದರ ಉದ್ದೇಶ ರಾಜುನನ್ನು ಹೊಗಳಿ ಅವನ ಮೇಲೆ ಒಡೆತನ ಸಾಧಿಸಿಕೊಳ್ಳುವುದಕ್ಕಲ್ಲ ಅಥವಾ ಅವನಿಗೆ ಎಲ್ಲಾ ಕಲಿಸಿ ಬೆಳೆಸುತ್ತಿರುವೆವೆಂಬ ಹೆಗ್ಗಳಿಕೆಗಲ್ಲ. ರಾಜು ತನ್ನ ಜೀವನ ರೂಪಿಸಿಕೊಳ್ಳುತ್ತಿರುವ ರೀತಿ ಈಗಿನ ಕರಾಳ ಸನ್ನಿವೇಶ ದಲ್ಲಿ ಕೆಲವು ಯುವಕರಿಗಾದರೂ ಮಾರ್ಗದರ್ಶಕವಾಗಬಹುದೆಂಬ ಆಶಯದಿಂದ ಮಾತ್ರ.

ಪ್ರಾರಂಭಿಕ ದಿನಗಳು:

ತುಮಕೂರು ಜಿಲ್ಲೆ , ಸಿರಾ ತಾಲ್ಲೂಕ್, ಚಿನ್ನಪ್ಪನಹಳ್ಳಿಯ ರೈತ ಕುಟುಂಬದ ಒಬ್ಬನೇ ಮಗನಾದ ರಾಜು 2012 ರಲ್ಲಿ ಪಿ.ಯು.ಸಿ ಮುಗಿಸಿ ಹಣದ ತೊಂದರೆಯಿಂದ ಮುಂದೆ ಓದುವುದನ್ನು ನಿಲ್ಲಿಸುತ್ತಾನೆ. ಕುಟುಂಬಕ್ಕೆ ಸೇರಿದ ಒಂದೇ ಎಕರೆ ಖುಷ್ಕಿ ಭೂಮಿಯ ಉತ್ಪಾದನೆ ಕುಟುಂಬದ ನಾಲ್ಕು ಸದಸ್ಯರ ಜೀವನೋಪಾಯಕ್ಕೆ ಸಾಲದಿರುವುದರಿಂದ ತಂದೆ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪರಿಸ್ಥಿತಿ. ಇದನ್ನರಿತ ರಾಜು ತಾನು ಸಹ ಏನಾದರೂ ಕೆಲಸ ಮಾಡಿ ತಂದೆ ತಾಯಿಗೆ ನೆರವಾಗಲು ಊರಲ್ಲಿಯೇ ಸಣ್ಣ ಪುಟ್ಟ ಕೆಲಸ ಮಾಡತೊಡಗುತ್ತಾನೆ. ಅಷ್ಟರಲ್ಲಿ ಅವನ ಅಕ್ಕನ ಮದುವೆ ನಿಶ್ಚಯವಾಗಿ ಖರ್ಚಿಗಾಗಿ ಮನೆಯವರು ಸಾಲ ಮಾಡುತ್ತಾರೆ. ಈಗಾಗಲೇ ಕುಡಿತಕ್ಕೆ ಶರಣಾಗಿದ್ದ ತಂದೆ ಸಾಲ ತೀರಿಸುವ ಜವಾಬ್ದಾರಿಯನ್ನು ರಾಜುವಿನ ಹೆಗಲಿಗೇರುತ್ತಾರೆ.

ಮನೆಯ ಪರಿಸ್ಥಿತಿ ಬಗ್ಗೆ ಅರಿವಿದ್ದ ರಾಜು ತನ್ನ ಊರಿನಿಂದ 10ಮೈಲಿ ದೂರದ ಪ್ಯಾಕೇಜಿಂಗ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿ ಸ್ವಲ್ಪ ಸಾಲ ತೀರಿಸುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಪ್ರತಿ ದಿನ ಬೆಳಿಗ್ಗೆಯಿಂದ ಸಾಯಂಕಾಲದ ವರೆವಿಗೆ ತಂಪು ಕೊಠಡಿಯಲ್ಲಿ ಪ್ಯಾಕೇಜಿಂಗ್ ಮಾಡುತ್ತಿದ್ದ ಅವನಿಗೆ ರಾತ್ರಿ ತಲೆ ಭಾರವಾಗಿ ಸರಿಯಾಗಿ ನಿದ್ರೆ ಬಾರದೆ 6ತಿಂಗಳಲ್ಲಿಯೇ ಆ ಕೆಲಸ ಬಿಟ್ಟು ತುಮಕೂರಿನ ಬಳಿ ರೈಸ್ ಮಿಲ್ ನಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾನೆ. ರೈಸ್ ಮಿಲ್ ನಲ್ಲಿಯ ದೂಳಿನಿಂದ ಕೆಮ್ಮು ನೆಗಡಿ ಪ್ರಾರಂಭವಾದುದರಿಂದ ಆ ಕೆಲಸವನ್ನೂ ಬಿಡುವ ಸಂದರ್ಭ ಬರುತ್ತದೆ .

ಹಳ್ಳಿ ಬಿಟ್ಟು ಪಟ್ಟಣ:

ಸಾಲ ತೀರಿಸಬೇಕಾದ ಒತ್ತಡ , ನಾಲ್ಕು ಜನರ ಹಾಗೆ ತಾನೂ ದುಡಿಯಬೇಕೆಂಬ ಹಂಬಲ 2014ರ ಕೊನೆಯಲ್ಲಿ ಅವನನ್ನು ಬೆಂಗಳೂರಿಗೆ ತಂದು ಬಿಡುತ್ತದೆ. ಮಾಗಡಿ ರೋಡ್ ಬಳಿ ಟೆಂಟ್ ಹೌಸ್ ನಲ್ಲಿ ದಿನಗೂಲಿ ಕೆಲಸ ಹಿಡಿಯುತ್ತಾನೆ. ಫ್ಯಾಕ್ಟರಿಗಳಲ್ಲಿ ಕೌಶಲ್ಯದ ಕೆಲಸ ಮಾಡಿ ತಿಂಗಳ ಸಂಬಳ ಪಡೆಯುತ್ತಿದ್ದ ಅವನಿಗೆ ದಿನಗೂಲಿ ಕೆಲಸ ಕಡಿಮೆ ಅನ್ನಿಸಿದರೂ ಸದ್ಯ ಆರೋಗ್ಯಕ್ಕೆ ಏನು ತೊಂದರೆ ಇಲ್ಲವಲ್ಲಾ ಎಂಬ ಸಮಾಧಾನ. ಇವನೂರಿನವರೆ 3 ಜನ ಸ್ನೇಹಿತರೊಂದಿಗೆ ರೂಮ್ ಮಾಡಿಕೊಂಡು ಹಗಲು ಹೊರಗಡೆ ತಿಂದುಕೊಂಡು ರಾತ್ರಿ ರೂಮಿನಲ್ಲಿಯೇ ಅಡಿಗೆ ಮಾಡಿಕೊಂಡು ದಿನ ತಳ್ಳುತ್ತಾರೆ.

‘ಪಾಪಿ ಸಮುದ್ರಕ್ಕೋದರೂ ಮೊಣಕಾಲುದ್ದ ನೀರು’ ಎನ್ನುವ ಹಾಗೆ ಕೆಲಸ ಧೈಹಿಕವಾಗಿ ಕಷ್ಟಕರ ವಾಗಿದ್ದರೂ ಶ್ರಮವಹಿಸಿ ಕೆಲಸ ಮಾಡುತ್ತಿದ್ದ ರಾಜು ಮತ್ತು ಅವನ ಸ್ನೇಹಿತರಿಗೆ ಅಲ್ಲಿ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆ ಕೇವಲ ಇವರಿಗಷ್ಟೇ ಸೀಮಿತವಾಗಿರದೆ ಇವರಿದ್ದ ಸುತ್ತಮುತ್ತಲ ಬಡಾವಣೆಗಳಿಗೂ ವ್ಯಾಪರಿಸಿ ರಾತ್ರಿ ಹೊತ್ತು ಅನೇಕರಿಗೆ ಹುಸಿರಾಟದ ತೊಂದರೆ, ಕೆಮ್ಮು ನೆಗಡಿ ಇತ್ಯಾದಿ ಗಳಿಂದ ತೊಂದರೆ ಅನುಭವಿಸತೊಡಗುತ್ತಾರೆ. ಅನೇಕ ದಿನಗಳವರೆಗೆ ಈ ತೊಂದರೆ ಯಾವ ಕಾರಣದಿಂದ ಎಂದು ಅಲ್ಲಿಯ ನಿವಾಸಿಗಳಿಗೆ ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ. ಸ್ವಲ್ಪ ದಿನಗಳ ನಂತರ ಮಾಗಡಿ ರಸ್ತೆಯಲ್ಲಿದ್ದ ಕೆಮಿಕಲ್ ಫ್ಯಾಕ್ಟರಿಯಿಂದ ಎಲ್ಲರೂ ಮಲಗಿದ ಮೇಲೆ ಹೊರ ಬಿಡುತ್ತಿದ್ದ ಹೊಗೆಯೇ ಇದಕ್ಕೆ ಕಾರಣ ಎಂದು ಮಾಧ್ಯಮಗಳ ಮೂಲಕ ತಿಳಿದು ಜನರು ದಿಗ್ಬ್ರಾಂತರಾಗುತ್ತಾರೆ. ಮುಂದೆ ಆ ಫಾಕ್ಟರಿ ಕಥೆ ಏನಾಗುತ್ತದೆ ಎಂಬುದು ಇಲ್ಲಿ ಮುಖ್ಯವಲ್ಲ .

ಬೆಳವಲದ ಮಡಿಲಿಗೆ :

ಇಷ್ಟರಲ್ಲಾಗಲೇ ಈ ಬೆಂಗಳೂರಿನ ಸಹವಾಸವೇ ಬೇಡ ಎಂದು ತೀರ್ಮಾನಿಸಿದ್ದ ರಾಜು ಮುಂದೆ ಏನು ಮಾಡುವುದೆಂದು ಕಂಗಾಲಾಗಿ ಬಾಲ್ಯ ಸ್ನೇಹಿತನಾದ ಪ್ರದೀಪ್ ನನ್ನು ಸಂಪರ್ಕಿಸುತ್ತಾನೆ. ಬೆಳವಲ ಫೌಂಡೇಶನ್ ನಲ್ಲಿ 2015ರಿಂದಲೇ ಕೆಲಸ ಮಾಡುತ್ತಿದ್ದ ಪ್ರದೀಪ್, ರಾಜುನನ್ನೂ ಅವನ ಜೊತೆ ಸೇರಿಸಿಕೊಳ್ಳಲು ಇಚ್ಛಿಸುತ್ತಾನೆ. ಹೀಗಾಗಿ ರಾಜು 2016 ರ ಜೂನ್ ನಲ್ಲಿ ಬೆಳವಲ ಫೌಂಡೇಶನ್ ಸೇರುತ್ತಾನೆ.

ಈ ದಶಕದ ಪ್ರಾರಂಭದಿಂದಲೂ18-20 ವರ್ಷ ವಯಸ್ಸಿನ ಬಹುತೇಕ ಹುಡುಗರು ವಿದ್ಯಾಭ್ಯಾಸ ಮೊಟಕು ಗೊಳಿಸಿ, ಹಳ್ಳಿ ಬಿಟ್ಟು ಬೆಂಗಳೂರು ಸೇರುತ್ತಿದ್ದ ಕಾಲದಲ್ಲಿ ರಾಜು ಬೆಂಗಳೂರು ಬಿಟ್ಟು ಬೆಳವಲ ಫಾರಂನಲ್ಲಿ ಕೃಷಿ ಕೆಲಸಕ್ಕೆ ಬಂದು ಸೇರಿದಾಗ ಅವನ ಸ್ನೇಹಿತರು ಹುಬ್ಬೇರಿಸುತ್ತಾರೆ. ಆ ಸಮಯದಲ್ಲಿ ಅನೇಕರು ಫೋನ್ ಮಾಡಿ ‘ಅದೇನೋ ಬೆಂಗಳೂರಿನ ಕೆಲಸ ಬಿಟ್ಟು ವ್ಯವಸಾಯ ಮಾಡೋಕೆ ಮತ್ತೆ ಹೋಗಿದ್ದೀಯಾ, ವ್ಯವಸಾಯ ಮಾಡೋದೇ ಆದ್ರೆ ಊರಲ್ಲಿಯೇ ಇರಬಹುದಾಗಿತ್ತಲ್ಲ , ನೀನೊಬ್ಬ ಹುಚ್ಚ ‘ ಎಂಬುದಾಗಿ ಗೇಲಿ ಮಾಡುತ್ತಿದ್ದರು ಎಂದು ಅನೇಕ ಸಂದರ್ಭಗಳಲ್ಲಿ ರಾಜು ಹೇಳಿಕೊಂಡಿರುತ್ತಾನೆ.

ಭಾವನಾತ್ಮಕ ಸ್ನೇಹ :

ವ್ಯವಸಾಯದ ಗಂಧವೇ ತಿಳಿಯದಿದ್ದ ಈ ಹುಡುಗನಿಂದ ಏನು ಕೆಲಸ ಮಾಡಿಸುವುದು ಎಂಬುದಷ್ಟೇ ಅಲ್ಲ , ಅವನ ಒರಟುತನ , ಮತ್ತು ಬೇಜವಬ್ದಾರಿಯನ್ನು ಕಂಡು ಮೊದ ಮೊದಲು ನಮಗೆಲ್ಲಾ ಬೇಸರವಾಗತೊಡಗಿತು . ಇವನು ಮಾಡುತ್ತಿದ್ದ ಎಡವಟ್ಟಿಗೆ ಪ್ರದೀಪ್ ಬೈಸಿಕೊಳ್ಳುತ್ತಿದ್ದ. ಬರ ಬರುತ್ತಾ ಅವರಿಬ್ಬರಲ್ಲೇ ಫೈಟಿಂಗ್ ಶುರುವಾಯಿತು. ಎಷ್ಟೋದಿನ ಅಡಿಗೆಯನ್ನೂ ಮಾಡಿಕೊಳ್ಳದೆ ಉಪವಾಸ ಮಲಗುತ್ತಿದ್ದರೆಂಬುದು ಮೂರನೆಯವರಿಂದ ತಿಳಿಯುತ್ತಿತ್ತು. ಬೆಳಿಗ್ಗೆ ನೋಡಿದರೆ ಒಂದೇ ತಟ್ಟೆಯಲ್ಲಿ ಕುಳಿತು ಊಟ ಮಾಡುತ್ತಿದ್ದರು. ಯಾಕ್ರೋ ಹೀಗೆ ಮಾಡುತ್ತೀರಾ ಅಂದರೆ ಇಬ್ಬರೂ ಬಾಯಿ ಬಿಡುತ್ತಿರಲಿಲ್ಲ. ಇವರಿಬ್ಬರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ವಾಗ ತೊಡಗಿತು. ಒಂದು ದಿನ ಇಬ್ಬರನ್ನೂ ಕೂರಿಸಿಕೊಂಡು ಬಹಳ ಒತ್ತಡ ಮಾಡಿದಾಗ ಪ್ರದೀಪ ಒಂದೊಂದೇ ವಿಷಯ ಹೇಳತೊಡಗಿದ. ‘ ರಾಜು ನಾನು ಅಕ್ಕ ಪಕ್ಕದ ಊರಿನವರು , ಶಿಶುವಿಹಾರ ದಿಂದಲೂ ಒಟ್ಟಿಗೆ ಓದಿದವರಷ್ಟೆ ಅಲ್ಲ, ರಜಾ ದಿನಗಳಲ್ಲೂ ಒಬ್ಬರನೊಬ್ಬರು ಬಿಟ್ಟಿರುತ್ತಿರಲಿಲ್ಲ. ಹಾಗಂತ ನಮ್ಮಿಬ್ಬರಲ್ಲಿ ಫೈಟಿಂಗ್ ಏನು ನಡೆಯುತ್ತಿರಲಿಲ್ಲವೆಂದಲ್ಲ . ಪ್ರತಿ ದಿನ ಒಂದಲ್ಲ ಒಂದು ವಿಷಯಕ್ಕೆ ನಮ್ಮಲ್ಲಿ ಕುಸ್ತಿ ನಡೆಯುತ್ತಲೇ ಇತ್ತು , ಒಂದು ಸಾರಿ ಅವನು ಗೆದ್ದರೆ ಇನ್ನೊಂದ್ಸಲ ನಾನು ಗೆಲ್ಲುತ್ತಿದ್ದೆ. ಆದರೆ ಜಗಳ ಮುಗಿದ ನಂತರ ಒಬ್ಬರನೊಬ್ಬರು ತಬ್ಬಿಕೊಂಡು ಅಳುತಿದ್ದೆವು. ಒಮ್ಮೆ ನಾವು ಕುಸ್ತಿ ಆಡುವಾಗ ರಾಜುವಿನ ಹಲ್ಲು ಮುರಿಯಿತು. ಅವನು ಅಳುತ್ತಾ ಮನೆಗೆ ಹೋದ, ಇಡೀ ರಾತ್ರಿ ದುಕ್ಕಿಸುತ್ತ ಪ್ರದೀಪ ಪ್ರದೀಪ ಎನ್ನುತಿದ್ದನಂತೆ ರಾಜು. “ಇನ್ನೊಂದು ಸಾರಿ ಪ್ರದೀಪನ ಜೊತೆ ಸೇರಬೇಡ ಈಗ ನೋಡು ಹೇಗೆ ಹೊಡೆಸಿಕೊಂಡು ಬಂದಿದ್ದೀಯಾ” ಅಂತ ಅವರ ಅಮ್ಮ ಬೈದುದಕ್ಕೆ ಅವನು ಹೇಳಿದ್ದು “ಅದಕ್ಕಲ್ಲಾ ಅಮ್ಮಾ ನಾನು ಅಳ್ತಿರೋದು, ಬರುವಾಗ ನಾನು ಅವನನ್ನು ತಬ್ಬಿಕೊಳ್ದೆ ಬಂದೆ ಅದಕ್ಕೆ ” ಅಂದನಂತೆ. ಈ ರೀತಿಯ ಸ್ನೇಹ ನಮ್ಮದು’ ಎಂದು ಪ್ರದೀಪ ಇನ್ನೂ ಏನೋ ಹೇಳಲು ಹೋಗುತ್ತಿದ್ದ. ಅಷ್ಟರಲ್ಲಾಗಲೇ ರಾಜುವಿನ ಕಣ್ಣಲ್ಲಿ ನೀರು ಮರಳುತ್ತಿದ್ದುದನ್ನು ನೋಡಿ, ಸಾಕ್ರಪ್ಪಾ ನಿಮ್ಮ ಕಥೆ ಎಂದು ನಾವು ಎದ್ದು ಹೋದೆವು. ಅಂದಿನಿಂದ ನಮಗೆ ರಾಜು ಮೇಲಿನ ಅಭಿಪ್ರಾಯವೇ ಬದಲಾಗತೊಡಗಿತು.

ಪರಿಸರ ಕೃಷಿ ಜ್ಞಾನ :

ವ್ಯವಸಾಯದ ಕೆಲಸಗಳೇ ಗೊತ್ತಿಲ್ಲದಿದ್ದ ರಾಜು ಗೆ ಪರಿಸರ ಕೃಷಿ ವಿಚಾರಗಳನ್ನು ಕಲಿಸುವುದು ಸ್ವಲ್ಪ ನಿಧಾನವಾದರೂ ಹೇಳಿದ್ದನ್ನು ವಿರೋಧಿಸುತ್ತಿರಲಿಲ್ಲ. ದೌರ್ಭಲ್ಯವೇ ಶಕ್ತಿ ಎನ್ನುವ ಹಾಗೆ ಅವನ ಒರಟುತನ ದುಡುಮೆಯ ಕಡೆ ವಾಲತೊಡಗಿತು. ಇಬ್ಬರು ಮಾಡುವ ಕೆಲಸವನ್ನು ಒಬ್ಬನೇ ಮಾಡತೊಡಗಿದ. ಆದರೆ ಬೆಳವಲದಲ್ಲಿ ಈಗಾಗಲೇ ಬಹುತೇಕ ತಳಿಯ ಗಿಡಗಳನ್ನು ನೆಟ್ಟು 2 ವರ್ಷಗಳಾಗಿತ್ತು. ಮುಂದೆ ಮಾಡಬೇಕಾಗಿದ್ದು ಅವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿ . ಇವನ ಶಕ್ತಿಯನ್ನೆಲ್ಲಾ ಅಗಿಯುವುದು ಕೆತ್ತುವುದರ ಕಡೆಯೇ ವ್ಯಯವಾಗುತ್ತಿತ್ತು. ಸೂಕ್ಷ್ಮ ಹಾಗೂ ಬುದ್ದಿವಂತಿಕೆ ವಿಚಾರಗಳು ಅವನ ತಲೆಗೆ ಹೋಗುತ್ತಿರಲಿಲ್ಲ. ಹೀಗಾಗಿ ಇವನನ್ನು ಏನು ಮಾಡುವುದಪ್ಪಾ ಎಂದು ಯೋಚಿಸುವಂತಾಯಿತು.

ರಾಜು ಬೆಳವಲಕ್ಕೆ ಬಂದ ನಂತರ ಪರಿಸರ ಕೃಷಿ ಬಗ್ಗೆ ಎರಡು ಕ್ಷೇತ್ರ ಮಟ್ಟದ ತರಬೇತಿಗಳು ನಡೆದಿದ್ದವು. ಮೂರನೇ ತರಬೇತಿಗೆ ಮೊದಲು ರಾಜು ಕೇಳಿದ ‘ಇಷ್ಟೊಂದು ಜನ ಇಲ್ಲಿಗೇಕೆ ಬರುತ್ತಾರೆ’ ಎಂದು. ಅವರೆಲ್ಲಾ ಬರುವುದು ಇಲ್ಲಿ ಮಾಡುತ್ತಿರುವ ಕೃಷಿ ಪದ್ದತಿಗಳನ್ನು ಕಲಿಯಲು ಎಂದು ತಿಳಿದಾಗ ‘ ಅಯ್ಯೋ ನಾನು 3 ತಿಂಗಳಿಂದ ಇಲ್ಲಿ ಇದ್ದೇನೆ ನಾನೇ ಏನು ತಿಳಿದುಕೊಳ್ಳುತ್ತಿಲ್ಲವಲ್ಲಾ ‘ ಎಂದು ಚಡಪಡಿಸಿದ. ಆಯ್ತು ರಾಜು ಮುಂದಿನ ತರಭೇತಿ ಯಲ್ಲಿ ಪ್ರಾಕ್ಟಿಕಲ್ಸ್ ಎಲ್ಲಾ ನೀನೇ ತೋರಿಸುವಿಯಂತೆ ಆದರೆ ನೀನು ಪ್ರತಿಯೊಂದನ್ನೂ ಸರಿಯಾಗಿ ತಿಳಿದುಕೊಂಡಿರಬೇಕು ಎಂದು ಹೇಳಿದಾಗ ಅವನಿಗೆ ಖುಷಿ ಜೊತೆಗೆ ಭಯವೂ ಪ್ರಾರಂಭವಾಯಿತು.

ದಿನಕಳೆದಂತೆ, ಪರಿಸರ ಕೃಷಿಯ ವಿವಿಧ ಮಜಲುಗಳ ಬಗ್ಗೆ ಪರಿಣಿತಿ ಪಡೆಯತೊಡಗಿದ. ಮೂರು ವರ್ಷಗಳಲ್ಲಿ ಬೆಳವಲ ಕ್ಷೇತ್ರದ 14ಬೆಳೆ ಮಾದರಿಗಳು, 200 ಕ್ಕೂ ಹೆಚ್ಚು ಸಸ್ಯ ಪ್ರಭೇದಗಳ ಹೆಸರುಗಳನ್ನು , ಜೈವಿಕ ಪರಿಕರಗಳ ತಯಾರಿಕೆ ಮತ್ತು ಉಪಯೋಗದ ವಿಧಾನಗಳು, ಮಣ್ಣಿನ ಸಾವಯವ ಇಂಗಾಲ ಮತ್ತು ಬೆಳೆಗಳ ಸಂಬಂಧ, ಬೀಜೋತ್ಪಾದನೆ, ಸಸ್ಯೋತ್ಪಾದನೆ, ಇತ್ಯಾದಿ ವಿಷಯಗಳನ್ನು ತರಬೇತಿ ಕಾರ್ಯ ಕ್ರಮಗಳ ಅಭ್ಯರ್ಥಿಗಳಿಗೆ, ಕ್ಷೇತ್ರ ಸಂದರ್ಶಕರಿಗೆ ಸಮಂಜಸವಾಗಿ ತಿಳಿಸಿಕೊಡುವ ಹಂತ ತಲುಪಿದನೆಂದರೆ ಅತಿಶಯೋಕ್ತಿಯಲ್ಲ.

ಮಾಡಿ ಕಲಿ :

ರಾಜು ಎಂದೂ ಕೆಲಸದಲ್ಲಿ ಮುಂದು. ಮೊದ ಮೊದಲು ಬೇರೆಯವರು ಏನು ಮಾಡುತ್ತಾರೆ, ಎಷ್ಟು ಮಾಡುತ್ತಾರೆ ಎನ್ನುವುದಕ್ಕಿಂತ ತಾನು ಮಾಡಿ ತೋರಿಸುವಲ್ಲಿಯೇ ಹೆಚ್ಚು ಉತ್ಸಾಹ ಹೊಂದಿರುತ್ತಿದ್ದ . ಹೀಗಾಗಿ ಫಾರಂ ನಲ್ಲಿ ಒಟ್ಟಾರೆ ಕೆಲಸದ ಗುಣಮಟ್ಟ ಇರುತ್ತಿರಲಿಲ್ಲ. ಸ್ವಲ್ಪ ದಿನಗಳ ನಂತರ ಇದನ್ನು ಅವನೇ ತಿದ್ದಿಕೊಂಡು ಅದು ಸಣ್ಣ ಕೆಲಸವೇ ಇರಲಿ ಜಾಸ್ತಿ ಪ್ರಮಾಣದ್ದೇ ಆಗಿರಲಿ ಎಲ್ಲಾ ಕೆಲಸಗಾರರನ್ನು ತನ್ನೊಂದಿಗೆ ಇಟ್ಟುಕೊಂಡು ಒಂದೊಂದು ಕೆಲಸ ಮುಗಿಸಿಕೊಂಡು ಮುಂದೆ ಹೋಗುವ ನಿಯಮ ಮಾಡಿಕೊಂಡ. ಪ್ರತಿಯೊಬ್ಬರನ್ನು ತನ್ನ ವಿಸ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸ ತೊಡಗಿದ. ಇದರಿಂದ ಕೆಲಸದ ಗುಣ ಮಟ್ಟ ಹಾಗೂ ಪ್ರಮಾಣ ಹೆಚ್ಚಾಗತೊಡಗಿತಲ್ಲದೆ ಕೆಲಸಗಾರರ ಮದ್ಯೆ ಸಮಗ್ರತೆ ಮತ್ತು ಬಾಂಧವ್ಯ ಬೆಳೆಯತೊಡಗಿತು.

ರಾಜು ಚಟ ಪಟಾಯಿಸುವ ಸ್ವಭಾವದವನು. ಒಂದು ಕಡೆ ಅರ್ಧ ಗಂಟೆ ಕೂರುವವನಲ್ಲ. ಬೆಳವಲದ ಹಣ್ಣು ತರಕಾರಿಗಳನ್ನು ಸಾವಯವ ರೈತ ಮಾರುಕಟ್ಟೆಗೆ ತೆಗೆದು ಕೊಂಡು ಹೋಗಿ ಗಂಟೆ ಗಟ್ಟಲೆ ಕೂತುಕೊಳ್ಳುವುದೆಂದರೆ ಅವನಿಗೆ ಅತಿ ಕಷ್ಟದ ಕೆಲಸ. ತಾನು ಬೆಳೆಸಿ ಕೊಯಿಲು ಮಾಡಿಕೊಟ್ಟರೆ ಆಯ್ತು ಮಾರಾಟವನ್ನು ಯಾರಾದರೂ ಮಾಡಲಿ ಎಂದು ಸುಮ್ಮನಾಗುತ್ತಿದ್ದ. ಎಷ್ಟೋಬಾರಿ ಇವನು ಮಾರುಕಟ್ಟೆಗೆ ಕಳುಹಿಸಿದ ಸೊಪ್ಪು ತರಕಾರಿಗಳು ಮಾರಾಟವಾಗದೆ ವಾಪಸ್ಸು ಬರುತ್ತಿದ್ದವು. ಇದರಿಂದ ಮಾರಾಟಮಾಡುವರಿಗೂ ಇವನಿಗೂ ಬಿನ್ನಾಭಿಪ್ರಾಯವಾಗುವುದರ ಜೊತೆ ಕ್ಷೇತ್ರದ ವರಮಾನ ಏರುಪೇರಾಗುತ್ತಿತ್ತು. ಒಂದೆರಡು ಬಾರಿ ಮಾರಾಟಕ್ಕೆ ಹೋಗುತ್ತಿದ್ದವರು ಅನಿವಾರ್ಯತೆಯಿಂದ ಹೋಗಲಾಗಲಿಲ್ಲ. ಆ ದಿನಗಳಲ್ಲಿ ರಾಜು ವಿಧಿಯಿಲ್ಲದೆ ಮಾರುಕಟ್ಟೆಗೆ ಹೋಗಬೇಕಾಯ್ತು. ಆ ನಂತರ ಫಾರಂನಲ್ಲಿ ಸೊಪ್ಪು ತರಕಾರಿ ಬೆಳೆಗಳ ವೈವಿದ್ಯತೆ ಮತ್ತು ಪ್ರಮಾಣದಲ್ಲಿ ಬದಲಾವಣೆ ಮಾಡುವುದನ್ನು ಪ್ರಾರಂಭಿಸಿದ. ನಮಗೆ ಇಷ್ಟಬಂದಿದ್ದನ್ನು ಬೆಳೆದರೆ ಎಲ್ಲಾ ಮಾರಾಟವಾಗುವುದಿಲ್ಲ, ಮಾರುಕಟ್ಟೆಗೆ ಏನು ಬೇಕೋ ಅದನ್ನು ಬೆಳೆಯಬೇಕೆಂಬುದನ್ನು ಕಲಿಯ ತೊಡಗಿದ.

ಬದ್ದತೆಯ ಬದುಕು :

ಉದ್ಯೋಗ ಯಾವುದಾದರೇನು , ಅದರಲ್ಲಿ ಬದ್ಧತೆ ಮತ್ತು ತಲ್ಲೀನತೆ ಇರಬೇಕು. ಆಗಲೇ ಆ ವಲಯದ ಪ್ರಗತಿಯೊಂದಿಗೆ ಅದರಲ್ಲಿ ತೊಡಗಿಸಿಕೊಂಡವರಲ್ಲೂ ಉನ್ನತಿ ಕಾಣಲು ಸಾಧ್ಯ. ವ್ಯವಸಾಯ ವಲಯ ಅದರಲ್ಲೂ ಪರಿಸರ ಕೃಷಿಯನ್ನು ತಬ್ಬಿಕೊಂಡ ರಾಜುವಿನಲ್ಲಿನ ಬದ್ಧತೆಯ ಪರಿಕಾಷ್ಠತೆಯನ್ನು ನೋಡಿದ್ದು ಅವನ ಬಾಲ್ಯ ಸ್ನೇಹಿತನಾದ ಪ್ರದೀಪ್ ಅನಿವಾರ್ಯ ಕಾರಣ ದಿಂದ ಊರಿಗೆ ಹೊರಟು ನಿಂತಾಗ. ಪ್ರದೀಪ್ ಹೋದ ಮೇಲೆ ನಾಲ್ಕಾರು ಹುಡುಗರು ಬಂದು ಹೋದರೂ ರಾಜು ಮಾತ್ರ ನೆಲೆಯೂರಿ ನಿಂತ. ಮೊಂಡು ಧೈರ್ಯದ ಹುಡುಗ ಬಲಿಷ್ಠ ಯುವಕನಾಗತೊಡಗಿದ.

ಬೆಳವಲ ಫೌಂಡೇಶನ್ ನಡೆಸುವ ಅನೇಕ ತರಭೇತಿ ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಲ್ಲಿ ಕೆಲವರು ರಾಜು ಕಡೆಯಿಂದ ವೈಯಕ್ತಿಕ ಅನುಕೂಲತೆಗಳನ್ನು ಹಣದ ಆಶೆ ತೋರಿಸಿ ಕೇಳಿರುತ್ತಾರೆ . ಇನ್ನೂ ಕೆಲವರು ‘ನಮ್ಮಲಿಗೆ ಬಾ ಹೆಚ್ಚಿನ ಸಂಬಳ ಕೊಡುತ್ತೇವೆ’ ಎನ್ನುವ ಆಮಿಷವನ್ನೂ ತೋರಿಸಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ರಾಜು ತೋರಿರುವುದು ಬದ್ಧತೆಯ ಜೊತೆಗೆ ಸಂಸ್ಥೆಯಲ್ಲಿಟ್ಟಿರುವ ನಿಷ್ಠೆ. ಬೆಳವಲ ಫೌಂಡೇಶೇನ್ ನೂರಾರು ಜನಕ್ಕೆ ಮಾರ್ಗದರ್ಶನ ನೀಡುತ್ತಿರುವಾಗ ಇಲ್ಲಿಯೇ ಕಲಿತ ನಾವುಗಳು ಬೇರೆಯವರಿಗೆ ಸ್ಪೂರ್ತಿಯಾಗಬೇಕೆಂಬುದೇ ಅವನ ಸಂದೇಶ.

ರಾಜು ತಪ್ಪು ಮಾಡಿದಾಗಲೂ ಸುಳ್ಳು ಹೇಳಿ ಮುಚ್ಚಿಡಲು ಪ್ರಯತ್ನಿಸಿದವನಲ್ಲ. ಅಂತಹ ಸನ್ನಿವೇಶಗಳಲ್ಲಿ ಮಾತಾಡದೆ ಸುಮ್ಮನಿರುತ್ತಾನೆ. ಆಗ ನಾವೇ ತಿಳಿದು ಕೊಳ್ಳಬೇಕು ಏನೋ ಪ್ರಮಾದವಾಗಿದೆ ಎಂದು. ಹಣಕಾಸಿನ ವಿಷಯದಲ್ಲೂ ಪಾರದರ್ಶಕ . ಎಷ್ಟೋ ದಿನಗಳ ಹಿಂದಿನ ವ್ಯವಹಾರವನ್ನು ಬಾಯಲ್ಲೇ ಹೇಳುತ್ತಾನೆ. ಲೆಕ್ಕ ಬರೆಯುವುದು ‘ವೇಸ್ಟ್ ಆಪ್ ಟೈಮ್’ ಎಂಬುದು ಅವನ ವಾದವಾಗಿತ್ತು. ತುಂಬಾ ಒತ್ತಡದ ನಂತರ ಪುಸ್ತಕದಲ್ಲಿ ಬರೆಯುವುದನ್ನು ಕಲಿತಿದ್ದಾನೆ.

ದೃಢ ನಿರ್ದಾರ:

2020 ರ ಮಾರ್ಚ್, ಏಪ್ರಿಲ್ ತಿಂಗಳುಗಳು ಇಡೀ ಜಗತ್ತಿಗೇ ಕೊರೋನಾದ ಕರಾಳ ದಿನಗಳು. ಭಾರತದ ಮಟ್ಟಿಗೆ ಹೇಳುವುದಾದರೆ ಮಾರ್ಚ್ 19 ರಂದು ದೇಶದ ಪ್ರಧಾನಿಗಳಿಂದ ಕರೆ. ಕೊರೋನಾ ಹರಡುವುದನ್ನು ತಡೆಗಟ್ಟಲು ಮಾರ್ಚ್ 22 ರಂದು ಒಂದು ದಿನದ ಜನತಾ ಕರ್ಫ್ಯೂ , ಜನ ಮನೆ ಬಿಟ್ಟು ಹೊರಗೆ ಬರಬಾರದೆಂಬ ಸಂದೇಶ. ಭಯದ ವಾತಾವರಣ. ಮರು ದಿನ ಬೆಂಗಳೂರಿನಲ್ಲಿದ್ದ ರಾಜು ಸ್ನೇಹಿತರೆಲ್ಲಾ ತಮ್ಮ ತಮ್ಮ ಊರುಗಳಿಗೆ ಪ್ರಯಾಣ. ಮಾರ್ಚ್ 25ರಂದು ಯುಗಾದಿ ಹಬ್ಬ ಬೇರೆ. ರಾಜು ಮಾತ್ರ ಇನ್ನೂ ಬೆಳವಲದಲ್ಲೇ. ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದ ಬಾಲ್ಯ ಸ್ನೇಹಿತ ಪ್ರದೀಪ್ ನಿಂದ ಫೋನ್ ಕರೆ ‘ವರ್ಷಕ್ಕೊಂದು ಯುಗಾದಿ ಊರಿಗೆ ಬರುವುದಿಲ್ಲವೇನೋ ‘ ಎಂದು. ರಾಜು ಮನಸ್ಸಿನಲ್ಲಿ ತಳಮಳ, ಹೋಗುವುದೋ ಬಿಡುವುದೋ. ಹೋದರೆ ಮತ್ತೆ ಬರಲು ಸಾಧ್ಯವಾಗುತ್ತೋ ಇಲ್ಲವೋ! ಬರುವುದು ತಡವಾದರೆ ಬೆಳವಲದ ಪಾಡೇನು, ಇಷ್ಟು ವರ್ಷ ನೆಟ್ಟು ಬೆಳಿಸಿದ ಸಾವಿರಾರು ಗಿಡಗಳನ್ನು ನೋಡುವವರಾರು, ಹಸು ಕರುಗಳ ಗತಿ ಏನು! ಹೋಗದಿದ್ದರೆ, ಊರಲ್ಲಿ ಅಮ್ಮ ಅಕ್ಕ ಏನಂದು ಕೊಂಡಾರು, ಹಬ್ಬ ಹರಿದಿನಗಳ್ಲಲೂ ಬಾರದ ನೀನೆಂತಾ ಮಗನೋ ಎಂದು ಬೈಯ್ಯುವುದಿಲ್ಲವೇ! ಕೊನೆಗೆ ರಾಜು ಅವರಮ್ಮನಿಗೆ ಫೋನ್ ಮಾಡಿ ತಿಳಿಸುತ್ತಾನೆ ‘ ಅಮ್ಮಾ ಈ ಪರಿಸ್ಥಿಯಲ್ಲಿ ನಾನು ಬರುವುದಕ್ಕಾಗುವುದಿಲ್ಲ, ನೀವು ಸಾಧ್ಯ ವಾದರೆ ಹಬ್ಬ ಮಾಡಿಕೊಳ್ಳಿ, ಇಲ್ಲವಾದರೆ ಎಲ್ಲಾ ಸರಿಹೋದ ಮೇಲೆ ಬರುತ್ತೇನೆ , ಆಗಲೇ ಯುಗಾದಿ ಮಾಡೋಣ’ ವೆಂದು .

ಮಾರ್ಚ್ 24 ರಂದು ರಾತ್ರಿ 8ಗಂಟೆಗೆ ಪ್ರಧಾನ ಮಂತ್ರಿಗಳಿಂದ ಮತ್ತೊಂದು ಘೋಷಣೆ. ಅಂದು ರಾತ್ರಿ 12 ಗಂಟೆಯಿಂದ 21ದಿನ ಇಡೀ ದೇಶವೇ ಲಾಕ್ ಡೌನ್. ಕೊರೋನಾ ಮಹಾಮಾರಿ ಹರಡುವುದನ್ನು ತಡೆಯಲು ಎಲ್ಲಾ ಸಂಚಾರ ವ್ಯವಸ್ಥೆಗಳ ಸ್ಥಗಿತ. ಯುಗಾದಿಯನ್ನು ನೀವಿರುವಲ್ಲಿಯೇ ಮಾಡಿ, ಮನೆ ಬಿಟ್ಟು ಹೊರಗೆ ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರಗಳ ಎಚ್ಚರ. ಸಾಮಾಜಿಕ ಅಂತರ ಕಾಪಾಡಿಕೊಂಡು ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ. ಅದರಲ್ಲಿ ಕೃಷಿ ಕ್ಷೇತ್ರವೂ ಒಂದು. ರಾಜು ಮನಸ್ಸಿನಲ್ಲಿ ಎಲ್ಲಾ ಆತಂಕಗಳ ನಡುವೆ ತನ್ನ ನಿರ್ಧಾರದ ಬಗ್ಗೆ ಹೆಮ್ಮೆ.

ಹ್ಯಾಪಿ ಮ್ಯಾನ್ :

ಕೊರೋನಾದ ಕರಿನೆರಳು ಉದ್ಯೋಗ ಹರಸಿ ಹಳ್ಳಿಗಳಿಂದ ಪಟ್ಟಣ ಸೇರಿದ್ದ ಕೊಟ್ಯಾಂತ ಯುವಕರ ಬದುಕಿನ ಮೇಲೆ ಘೋರ ಭರ ಸಿಡಿಲು. ಫ್ಯಾಕ್ಟರಿ, ರಿಯಲ್ ಎಸ್ಟೇಟ್ , ಗಾರ್ಮೆಂಟ್ಸ್ ಇತ್ಯಾದಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೀದಿ ಪಾಲು. ದಿಗ್ಬಂದನ, ಹಸಿವು, ನೀರಡಿಕೆ ಯಾವುದನ್ನೂ ಲೆಕ್ಕಿಸದ ದುಡಿಯುವ ವರ್ಗ ಸಂಸಾರ ಸಮೇತ ತಮ್ಮ ತಮ್ಮ ಹಳ್ಳಿಗಳ ಕಡೆ ಹೆಜ್ಜೆ. ಮುಂದಿನ ಬದುಕು ಅನಿಶ್ಚಿತ!

ರಾಜು ಮಾತ್ರ ಅಚಲ. ದಿಗ್ಬಂದನದ ನಡುವೆಯೂ ಕೃಷಿ ಕ್ಷೇತ್ರದ ಕೆಲಸಗಳು ಮುಂದುವರಿಯಲೇ ಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಆಹಾರದ ಹಾಹಾಕಾರವಾಗುವ ಅರಿವು . ಸರ್ಕಾರದಿಂದಲೂ ಈ ಬಗ್ಗೆ ಉತ್ತೇಜನ. ರಾಜು ನ ಮನಸ್ಸು ಮತ್ತಷ್ಟು ಗಟ್ಟಿ. ಬೆಳಗೊಳದಲ್ಲಿ ಕೆಲಸ ವಿಲ್ಲದೆ ಕುಳಿತಿದ್ದ ಕೆಲವರನ್ನು ಸೇರಿಸಿಕೊಂಡು ಇನ್ನಷ್ಟು ಪ್ರದೇಶದಲ್ಲಿ ಸೊಪ್ಪು ತರಕಾರಿಗಳ ಬಿತ್ತನೆ. ಸಂತೆ ಮುಂಗಟ್ಟಿಲ್ಲದೆ ಕಂಗಾಲಾಗಿದ್ದ ಬೆಳಗೊಳದ ಜನರಿಗೆ ಸಾಯಂಕಾಲದ ಹೊತ್ತು ಕಡಿಮೆ ಬೆಲೆಗೇ ಸಾವಯವ ಹಣ್ಣು ತರಕಾರಿಗಳ ಮಾರಾಟ. ಕೆಲವರಿಗೆ ಉಚಿತ ವಿತರಣೆ ಕೂಡ.

ಕಳೆದ ಹದಿನೈದು ದಿನಗಳಿಂದ ರಾಜು ತಾನು ಉಳುಮೆ ಮಾಡುತ್ತಿರುವ , ಹುಣಿಸೆ ಮರ ಬಡಿಯುವ, ಹಣ್ಣು ತರಕಾರಿಗಳ ಕೊಯಿಲು ಮಾಡುವ ಚಿತ್ರಗಳನ್ನು ವಾಟ್ಸ್ ಆಪ್ ಮತ್ತು ಮುಖ ಪುಟಗಳಲ್ಲಿ ಶೇರ್ ಮಾಡಿ ಬರೆಯುತ್ತಾನೆ, ‘ನಾನು ಖುಷಿ (I am happy)’ ಎಂದು . ಹಳ್ಳಿಗಳಲ್ಲಿ ಕೆಲಸವಿಲ್ಲದೆ ಮುಂದಿನ ದಿನಗಳ ಬದುಕಿನ ಬಗ್ಗೆ ಯೋಚಿಸುತ್ತಾ ಕುಳಿತ ರಾಜು ಸ್ನೇಹಿತರಿಂದ ಪ್ರಶಂಸೆಯ ಕರೆಗಳು ‘ನೀನೆ ಗೆದ್ದೆ, ಕೃಷಿಯೇ ಖುಷಿ’

ಬೆಳವಲ ಫೌಂಡೇಶನ್

10-4-2020



4 thoughts on “ಹ್ಯಾಪಿ ಮ್ಯಾನ್ ರಾಜು”

Leave a Reply to Belavala Foundation Cancel reply

Your email address will not be published. Required fields are marked *